ಆರಂಭ

ಮೊದಲ ಹೆಜ್ಜೆಗಳು.....

ಕಾದು ನಿಂತಾಗ

ಮನೆಯ ಹೆಬ್ಬಾಗಿಲಲ್ಲಿ ನಿಂತ ಮಂಗಳ ಕನಸ್ಸುಗಳನ್ನು ಸಾಕುತಿದ್ದ ಮನಸ್ಸಿನಿಂದ ಕಣ್ಣಾಡಿಸಿದಳು. ಮಧ್ಯಾನದ ಉರಿಬಿಸಿಲು ಇಳಿದು ಕತ್ತಲು ನಿಧಾನವಾಗಿ ಹರಡುತಿತ್ತು. ಮನಸ್ಸಿನಲ್ಲಿ ಉದ್ವೇಗ, ಕಾತರ. ಅವಸರಿಸುವ ಸ್ವಭಾವದ ಹೃದಯ. ಗಾಬರಿ ಮೊರೆಯೊಂದಿಗೆ ಕಾಯುತ್ತಾ ನಿಂತಳು. 


ಪಕ್ಕದ ಮನೆ ಕುಮಾರ ಮತ್ತೆ ಕೊಳಲನ್ನು ಅಭ್ಯಾಸಿಸುತ್ತಿದ್ದ. ಎಳೆ ಸಾಯಂಕಾಲದಲ್ಲಿ ಅರೆ ಬೆರೆ ಕಲೆತ ಅವನ ವಿದ್ಯೆ, ಅವನ ಸಾಕು ನಾಯಿಯ ಬೊಗಳಿಕೆಯೊಂದಿಗೆ ಮಿಶ್ರವಾಗಿ ಅವಳ ಕಿವಿಗೆ ತಟ್ಟಿದರೂ ಅರಿವಿಲ್ಲದಂತೆ ಜಡವಾಗಿ ನಿಂತಳು. ಅವನ ಸ್ವರಗಳು ಅವಳಿಂದ ಮಾತುಗಳನ್ನೇ ಕದ್ದಂತೆ, ಮೌನ ಕವಿದಿತ್ತು. ನಂಬಿಕೆಗಳನ್ನು ಹೊತ್ತ ಅವಳ ಕಣ್ಣುಗಳು ಇನ್ನೇನು ನಿರಾಶೆಯ   ಕೊರಗಿನಲ್ಲಿ  ನೀರು ಚಿಮ್ಮಿಸುವಂತೆ ಸೂಚಿಸಿದಾಗ, ಕೊನೆಗೆ ಅವನ ನೆರಳು ದೂರದಲ್ಲಿ ವ್ಯಕ್ತವಾಯಿತು. ಹಿಗ್ಗಿ ಅಡಿಗೆ ಮನೆಗೆ ಧಾವಿಸಿ  ಹಳೆ ಡಬ್ಬಿಗೆ ಕೈ ಹಾಕಿದಳು. ಕಿಟಕಿಗಳನ್ನು ತೆರೆದಿಟ್ಟಳು. ಧೀರ್ಗವಾಗಿ ಬೆಳೆದುಬಂದ  ದಾಸವಾಳದ ಎಲೆಗಳು ಕಿಟಕಿಯಿಂದ ಇಣುಕಿ ನೋಡಿ ಗಮನಿಸಿತಿದ್ದವು. ಅಲ್ಲಿ ಸಂಪಿಗೆ ಗಿಡ ನಗುತಿತ್ತು. ಇವಳ ಮುಖದಲ್ಲಿ ಈಗೆ ಸಂತೋಷದ ಛಾಯೆ. 

ಮಧ್ಯಾನ ಮಾಡಿದ ಅಡಿಗೆ ಇನ್ನೂ ಮೂಲೆಯಲ್ಲಿತ್ತು. ಧಾರಾಳವಾಗಿ ಅಕ್ಕಿ ಹಾಕಿ ಮಾಡಿದ ಅನ್ನ ಇಂದು ತಂಗಳು, ಆದರೂ ಚಿಂತೆ ಇಲ್ಲ. ಅವನಿಗೆ ಹಿಡಿಸದಿದ್ದರೆ ಪಾಯಸವನ್ನು ತಯಾರಿಸಲೂ ಅವಳಿಗೆ ಒಪ್ಪಿಗೆ. ಒಂದು ತಟ್ಟೆಯನ್ನು ಕನ್ನಡಿ ಮಾಡಿಕೊಂಡು ತನ್ನ ಪ್ರತಿಬಿಂಬವನ್ನು ಪರೀಕ್ಷಿಸಿದಳು. 

ಮನೆಗೆ ಬಂದವನೇ ನೇರ ಚಪ್ಪಲಿ ಜೋಡಿಸಿ ಅಡಿಗೆ ಮನೆಯನ್ನು ಪ್ರವೇಶಿಸಿ ಹಸಿವೆಯ ಹೆಸರೇಳಿದ. 'ಮಂಗಳ, ಊಟ ಇದೆಯಾ?' ಉತ್ತರವಾಗಿ ಒಂದು ಎಲೆ ಹರಡಿದವಳೇ ರಾಜರಿಗೆ ಸೀಮಿತವಾದ ಹಬ್ಬದಡುಗೆಯನ್ನೇ ಬಡೆಸಿದಳು. ಅನ್ನ, ತೊಕ್ಕು, ಸಾರು...

ಮಾತನಾಡದೆ ಎಲ್ಲವನ್ನೂ ತಿಂದನು. ಅವನ ಮುಖವೇ ಅವಳಿಗೆ ತೆರೆದ ಪುಸ್ತಕ, ಆಘಾದ ಶ್ರದ್ದೆಯಿಂದ ಓದಿದಳು. ಅವಳು ಪ್ರತಿಕ್ರಿಯೆಯನ್ನು  ಕೋರದಿದ್ದರೂ ಅವನ ಬಾಯಿ ಚಪ್ಪರಿಕೆಯೇ ಅವಳನ್ನು ಹೊಗಳಿತು. ಕೆಲಸದ ವಿಚಾರವಾಗಿ ಒಂದೆರಡು ಮಾತನಾಡುತ್ತಾ ಕೈತೊಳೆದು ಸಾವಕಾಶವಾಗಿ ಉಯ್ಯಾಲೆಯ ಮೇಲೆ ಕುಳಿತುಕೊಂಡ. ಎಲೆ ಅಡಿಕೆ ತಂದಿಟ್ಟಳು. 

ಮನೆಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದ. 'ಕೆಲಸ, ಗೊಂದಲ....ಬಹಳ ತಲೆ ನೋವು. ಆದರೆ ಮನೆಗೆ ಬಂದು ನಿನ್ನ ಮುಖ ನೋಡಿದರೆ ಅವೆಲ್ಲವನ್ನು ಮರೆಯುವೆ.'

'ಸುಳ್ಳು ಹೇಳುವಿರಾ?'

'ಮಂಗಳ, ನಿನಗೆ ನೂರೆಂಟು ಕವಿತೆಗಳನ್ನು ಬರೆಯುತಿದ್ದೆ, ಮರೆತೆಯ?'

'ಅದು ಸುಲಭ ಮರುವಿಗೆ ನಿಲುಕದ ಮಾತು. ಮುಪ್ಪಿಗೂ ನಿಲುಕದ ಮಾತು. ಬರೆದ ಹಾಳೆ ಹರೆದು ಹೋದರೂ ಪದಗಳು ನನ್ನ ನಾಲಿಗೆಯ ಮೇಲಿವೆ.'

'ವಯಸ್ಸು, ಸಮಯ. ಹುಮ್ಮಸ್ಸು. ನನಗೇನು? ಪುರುಸೊತ್ತು ಇತ್ತು, ಹರೆಯದ ಮುಗ್ದ ಕನಸುಗಳು ಕವಿತೆಗಳಾದವು.'

'ಹಾಗಾದರೆ ಈಗ ಕಾಲಕ್ರಮೇಣವಾಗಿ ಒಲವು ಕಡಿಮೆಯಾಗಿದೆಯೋ?'

'ಇಲ್ಲ, ಮಂಗಳ. ನಿನಗೆ ನೂರಾರು ಕವಿತೆಗಳನ್ನು ಬರೆಯಬೇಕೆಂಬ ಆಸೆ. ಸಮಯ ಒದಗುತ್ತಿಲ್ಲ. ಕೆಲವೊಮ್ಮೆ ಬೇಜಾರಾಗುತ್ತದೆ. ಮನೆಯಲ್ಲಿ ಬೇರೆ ಈ ಏಕಾಂತ...ನಿನಗೆ ಸೂಕ್ತವಲ್ಲ.'

'ಅದು ನೀವು ಬರುವವರೆಗೂ. ಕಾಲ ಹೇಗೋ ತಳ್ಳುತ್ತೇನೆ. ನನ್ನ ಬಗ್ಗೆ ಕಾಳಜಿ ಬೇಡ. ನಿಮಗೆ ಕಾಳಜಿ ಹೇಗಿದ್ದರೂ ಕಡಿಮೆ!'

ಹುಸಿ ಮುನಿಸಿನಲ್ಲಿ ಅವನಿಗೆ ಬೆನ್ನು ಮಾಡಿ ಕೂತಳು. ನಕ್ಕನು.

'ಕೋಪಕ್ಕೆ ಪ್ರತಿಕ್ರಿಯೆ ನಗುವೇ?' ಅರ್ಥವಾಗಲಿಲ್ಲ!

'ನಿನಗೆ ಬೆಳ್ಳಿ ಬಳೆ ಮಾಡಿಸುತಿದ್ದಿನಿ.'

ಅವಳ ಕಣ್ಣುಗಳು ಅರಳಿದವು. ನಾಟಕವನ್ನು ಮರೆತಳು. 

'ಯಾಕೆ?'

'ನನ್ನ ಅಂತರಾಳದ ಇಚ್ಛೆ.'

ಎಲ್ಲಿಲ್ಲದ ಸಂತೋಷ! ಮರುದಿನ ಸುಬ್ಬಮ್ಮ ಸಿಕ್ಕಾಗ ಈ ಸಂಗತಿಯನ್ನು ವಿವರಿಸುವುದುಂಟು. 'ಇಂಥ ಗಂಡನನ್ನು ಕಟ್ಟಿಕೊಳಲ್ಲು  ಪುಣ್ಯ ಮಾಡಿದ್ದೆ!'
ಅವಳು ಅಂದು ಕಂಡ ತೃಪ್ತಿ ಯಾರೂ ಕಂಡಿರಲಿಲ್ಲ. 

ಈ ಕಥೆಯನ್ನು ಹೇಳಿದವಳು ಅವಳ ಮನೆಯ ಹೆಬ್ಬಾಗಿಲ ಜಗಲಿಯ ಮೇಲೆ ಕುಳಿತು ಕಾಲ ತಳ್ಳುತಿದ್ದಳು. ಕೂತವಳು ಕಲ್ಲಾದಳು. ಮಧ್ಯಾನ, ಸಾಯಂಕಾಲ, ನಡು ರಾತ್ರಿ. ಅಲಗಾಡಲಿಲ್ಲ. 
ಕೊನೆಗೆ ಸೂರ್ಯನ ಮೊದಲ ರೇಖೆಗಳಿಗೆ  ಕನಸ್ಸುಗಳು ಕರಗಿದಾಗ ಬಾಗಿಲನ್ನು ಬದ್ರ ಮಾಡಿ ಮಾಯವಾದಳು. ಸಿಗದಂತೆ. 

1 comments:

"ಬರೆದ ಹಾಳೆ ಹರೆದು ಹೋದರೂ ಪದಗಳು ನನ್ನ ನಾಲಿಗೆಯ ಮೇಲಿವೆ".. ಮೆಚ್ಚಿದೆ!