ಆರಂಭ

ಮೊದಲ ಹೆಜ್ಜೆಗಳು.....

ಮಾತು ವಿರಳವಾದರೂ 
ಹೃದಯ ಮರೆಯಲಿಲ್ಲ 
ಆಸೆ ಯೆದುರುವಾದಿಸಲಿಲ್ಲ 
ಅಂದು
ನನ್ನ ನೆನಪಿನ ಛಾಯೆ 
ಎಲ್ಲೆಡೆ 
ಹರಡಿದಾಗ...  
I

ನಿನ್ನನ್ನು ಜಪಿಸುವುದು 
ಏಕಾಂತದ ಉಪಯೋಗ 
ನಿನ್ನ ಹಾಡುವುದು 
ನನ್ನ ಬಯಕೆ 
ನಿನ್ನನ್ನು ಬರೆಯುವುದು 
ನನ್ನ ಬೆರಳಿನ ಕೀರ್ತಿ 
ನಿನ್ನ ನೆನಪು 
ಕನವರಿಕೆ


II


ಅಪರೂಪದ ವಿವರ

ನಮ್ಮ ಬಾಗಿಲಲ್ಲಿ ಹೊಸ ತೋರಣವಂತೆ,
 ಹಿತ್ತಲಲ್ಲಿ ಎಳೆ  ತಾವರೆಯಂತೆ,
 ಹವಳದ ಮಡಿಕೆ ಹೋಳೆಯುತ್ತಿದೆಯಂತೆ 
 ನಾ ಅರಿಯದಂತೆ
 ಮುಸ್ಸಂಜೆಯ ಕಂಚಿನ ಕಿರಣಗಳಂತೆ, 
ಅಲೆಯಿತು ಮನ ಹಲವೆಡೆ  
ಅವನ ಕಣ್ಣಿಗೆ  ಸೂಕ್ತವಾದ ಬಣ್ಣ ಕಪ್ಪು ಬಿಳುಪು ಕೆಂಪು   ಹೊಳಪು 
 ಪ್ರಯತ್ನಕ್ಕೆ ಮೀರಿದ ಕವಿತೆ 
 ನನ್ನ ಹೃದಯವನ್ನು ಅರಿತೆ  ತಿಳಿಯದಂತೆ……  
 ಮನಸ್ಸೋತೆ  
 ನಮ್ಮ ಅಲ್ಪ ವಿವರದ ಗುರುತು,
 ಕಾಡುತ್ತಿದೆ ಇಂದು ….ಇನಿಯಾ, ನಿನ್ನ ನೆನಪು

ಕಾದು ನಿಂತಾಗ

ಮನೆಯ ಹೆಬ್ಬಾಗಿಲಲ್ಲಿ ನಿಂತ ಮಂಗಳ ಕನಸ್ಸುಗಳನ್ನು ಸಾಕುತಿದ್ದ ಮನಸ್ಸಿನಿಂದ ಕಣ್ಣಾಡಿಸಿದಳು. ಮಧ್ಯಾನದ ಉರಿಬಿಸಿಲು ಇಳಿದು ಕತ್ತಲು ನಿಧಾನವಾಗಿ ಹರಡುತಿತ್ತು. ಮನಸ್ಸಿನಲ್ಲಿ ಉದ್ವೇಗ, ಕಾತರ. ಅವಸರಿಸುವ ಸ್ವಭಾವದ ಹೃದಯ. ಗಾಬರಿ ಮೊರೆಯೊಂದಿಗೆ ಕಾಯುತ್ತಾ ನಿಂತಳು. 


ಪಕ್ಕದ ಮನೆ ಕುಮಾರ ಮತ್ತೆ ಕೊಳಲನ್ನು ಅಭ್ಯಾಸಿಸುತ್ತಿದ್ದ. ಎಳೆ ಸಾಯಂಕಾಲದಲ್ಲಿ ಅರೆ ಬೆರೆ ಕಲೆತ ಅವನ ವಿದ್ಯೆ, ಅವನ ಸಾಕು ನಾಯಿಯ ಬೊಗಳಿಕೆಯೊಂದಿಗೆ ಮಿಶ್ರವಾಗಿ ಅವಳ ಕಿವಿಗೆ ತಟ್ಟಿದರೂ ಅರಿವಿಲ್ಲದಂತೆ ಜಡವಾಗಿ ನಿಂತಳು. ಅವನ ಸ್ವರಗಳು ಅವಳಿಂದ ಮಾತುಗಳನ್ನೇ ಕದ್ದಂತೆ, ಮೌನ ಕವಿದಿತ್ತು. ನಂಬಿಕೆಗಳನ್ನು ಹೊತ್ತ ಅವಳ ಕಣ್ಣುಗಳು ಇನ್ನೇನು ನಿರಾಶೆಯ   ಕೊರಗಿನಲ್ಲಿ  ನೀರು ಚಿಮ್ಮಿಸುವಂತೆ ಸೂಚಿಸಿದಾಗ, ಕೊನೆಗೆ ಅವನ ನೆರಳು ದೂರದಲ್ಲಿ ವ್ಯಕ್ತವಾಯಿತು. ಹಿಗ್ಗಿ ಅಡಿಗೆ ಮನೆಗೆ ಧಾವಿಸಿ  ಹಳೆ ಡಬ್ಬಿಗೆ ಕೈ ಹಾಕಿದಳು. ಕಿಟಕಿಗಳನ್ನು ತೆರೆದಿಟ್ಟಳು. ಧೀರ್ಗವಾಗಿ ಬೆಳೆದುಬಂದ  ದಾಸವಾಳದ ಎಲೆಗಳು ಕಿಟಕಿಯಿಂದ ಇಣುಕಿ ನೋಡಿ ಗಮನಿಸಿತಿದ್ದವು. ಅಲ್ಲಿ ಸಂಪಿಗೆ ಗಿಡ ನಗುತಿತ್ತು. ಇವಳ ಮುಖದಲ್ಲಿ ಈಗೆ ಸಂತೋಷದ ಛಾಯೆ. 

ಮಧ್ಯಾನ ಮಾಡಿದ ಅಡಿಗೆ ಇನ್ನೂ ಮೂಲೆಯಲ್ಲಿತ್ತು. ಧಾರಾಳವಾಗಿ ಅಕ್ಕಿ ಹಾಕಿ ಮಾಡಿದ ಅನ್ನ ಇಂದು ತಂಗಳು, ಆದರೂ ಚಿಂತೆ ಇಲ್ಲ. ಅವನಿಗೆ ಹಿಡಿಸದಿದ್ದರೆ ಪಾಯಸವನ್ನು ತಯಾರಿಸಲೂ ಅವಳಿಗೆ ಒಪ್ಪಿಗೆ. ಒಂದು ತಟ್ಟೆಯನ್ನು ಕನ್ನಡಿ ಮಾಡಿಕೊಂಡು ತನ್ನ ಪ್ರತಿಬಿಂಬವನ್ನು ಪರೀಕ್ಷಿಸಿದಳು. 

ಮನೆಗೆ ಬಂದವನೇ ನೇರ ಚಪ್ಪಲಿ ಜೋಡಿಸಿ ಅಡಿಗೆ ಮನೆಯನ್ನು ಪ್ರವೇಶಿಸಿ ಹಸಿವೆಯ ಹೆಸರೇಳಿದ. 'ಮಂಗಳ, ಊಟ ಇದೆಯಾ?' ಉತ್ತರವಾಗಿ ಒಂದು ಎಲೆ ಹರಡಿದವಳೇ ರಾಜರಿಗೆ ಸೀಮಿತವಾದ ಹಬ್ಬದಡುಗೆಯನ್ನೇ ಬಡೆಸಿದಳು. ಅನ್ನ, ತೊಕ್ಕು, ಸಾರು...

ಮಾತನಾಡದೆ ಎಲ್ಲವನ್ನೂ ತಿಂದನು. ಅವನ ಮುಖವೇ ಅವಳಿಗೆ ತೆರೆದ ಪುಸ್ತಕ, ಆಘಾದ ಶ್ರದ್ದೆಯಿಂದ ಓದಿದಳು. ಅವಳು ಪ್ರತಿಕ್ರಿಯೆಯನ್ನು  ಕೋರದಿದ್ದರೂ ಅವನ ಬಾಯಿ ಚಪ್ಪರಿಕೆಯೇ ಅವಳನ್ನು ಹೊಗಳಿತು. ಕೆಲಸದ ವಿಚಾರವಾಗಿ ಒಂದೆರಡು ಮಾತನಾಡುತ್ತಾ ಕೈತೊಳೆದು ಸಾವಕಾಶವಾಗಿ ಉಯ್ಯಾಲೆಯ ಮೇಲೆ ಕುಳಿತುಕೊಂಡ. ಎಲೆ ಅಡಿಕೆ ತಂದಿಟ್ಟಳು. 

ಮನೆಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದ. 'ಕೆಲಸ, ಗೊಂದಲ....ಬಹಳ ತಲೆ ನೋವು. ಆದರೆ ಮನೆಗೆ ಬಂದು ನಿನ್ನ ಮುಖ ನೋಡಿದರೆ ಅವೆಲ್ಲವನ್ನು ಮರೆಯುವೆ.'

'ಸುಳ್ಳು ಹೇಳುವಿರಾ?'

'ಮಂಗಳ, ನಿನಗೆ ನೂರೆಂಟು ಕವಿತೆಗಳನ್ನು ಬರೆಯುತಿದ್ದೆ, ಮರೆತೆಯ?'

'ಅದು ಸುಲಭ ಮರುವಿಗೆ ನಿಲುಕದ ಮಾತು. ಮುಪ್ಪಿಗೂ ನಿಲುಕದ ಮಾತು. ಬರೆದ ಹಾಳೆ ಹರೆದು ಹೋದರೂ ಪದಗಳು ನನ್ನ ನಾಲಿಗೆಯ ಮೇಲಿವೆ.'

'ವಯಸ್ಸು, ಸಮಯ. ಹುಮ್ಮಸ್ಸು. ನನಗೇನು? ಪುರುಸೊತ್ತು ಇತ್ತು, ಹರೆಯದ ಮುಗ್ದ ಕನಸುಗಳು ಕವಿತೆಗಳಾದವು.'

'ಹಾಗಾದರೆ ಈಗ ಕಾಲಕ್ರಮೇಣವಾಗಿ ಒಲವು ಕಡಿಮೆಯಾಗಿದೆಯೋ?'

'ಇಲ್ಲ, ಮಂಗಳ. ನಿನಗೆ ನೂರಾರು ಕವಿತೆಗಳನ್ನು ಬರೆಯಬೇಕೆಂಬ ಆಸೆ. ಸಮಯ ಒದಗುತ್ತಿಲ್ಲ. ಕೆಲವೊಮ್ಮೆ ಬೇಜಾರಾಗುತ್ತದೆ. ಮನೆಯಲ್ಲಿ ಬೇರೆ ಈ ಏಕಾಂತ...ನಿನಗೆ ಸೂಕ್ತವಲ್ಲ.'

'ಅದು ನೀವು ಬರುವವರೆಗೂ. ಕಾಲ ಹೇಗೋ ತಳ್ಳುತ್ತೇನೆ. ನನ್ನ ಬಗ್ಗೆ ಕಾಳಜಿ ಬೇಡ. ನಿಮಗೆ ಕಾಳಜಿ ಹೇಗಿದ್ದರೂ ಕಡಿಮೆ!'

ಹುಸಿ ಮುನಿಸಿನಲ್ಲಿ ಅವನಿಗೆ ಬೆನ್ನು ಮಾಡಿ ಕೂತಳು. ನಕ್ಕನು.

'ಕೋಪಕ್ಕೆ ಪ್ರತಿಕ್ರಿಯೆ ನಗುವೇ?' ಅರ್ಥವಾಗಲಿಲ್ಲ!

'ನಿನಗೆ ಬೆಳ್ಳಿ ಬಳೆ ಮಾಡಿಸುತಿದ್ದಿನಿ.'

ಅವಳ ಕಣ್ಣುಗಳು ಅರಳಿದವು. ನಾಟಕವನ್ನು ಮರೆತಳು. 

'ಯಾಕೆ?'

'ನನ್ನ ಅಂತರಾಳದ ಇಚ್ಛೆ.'

ಎಲ್ಲಿಲ್ಲದ ಸಂತೋಷ! ಮರುದಿನ ಸುಬ್ಬಮ್ಮ ಸಿಕ್ಕಾಗ ಈ ಸಂಗತಿಯನ್ನು ವಿವರಿಸುವುದುಂಟು. 'ಇಂಥ ಗಂಡನನ್ನು ಕಟ್ಟಿಕೊಳಲ್ಲು  ಪುಣ್ಯ ಮಾಡಿದ್ದೆ!'
ಅವಳು ಅಂದು ಕಂಡ ತೃಪ್ತಿ ಯಾರೂ ಕಂಡಿರಲಿಲ್ಲ. 

ಈ ಕಥೆಯನ್ನು ಹೇಳಿದವಳು ಅವಳ ಮನೆಯ ಹೆಬ್ಬಾಗಿಲ ಜಗಲಿಯ ಮೇಲೆ ಕುಳಿತು ಕಾಲ ತಳ್ಳುತಿದ್ದಳು. ಕೂತವಳು ಕಲ್ಲಾದಳು. ಮಧ್ಯಾನ, ಸಾಯಂಕಾಲ, ನಡು ರಾತ್ರಿ. ಅಲಗಾಡಲಿಲ್ಲ. 
ಕೊನೆಗೆ ಸೂರ್ಯನ ಮೊದಲ ರೇಖೆಗಳಿಗೆ  ಕನಸ್ಸುಗಳು ಕರಗಿದಾಗ ಬಾಗಿಲನ್ನು ಬದ್ರ ಮಾಡಿ ಮಾಯವಾದಳು. ಸಿಗದಂತೆ. 




ದಿನನಿತ್ಯದಂತೆ ಕಾಲೇಜು ಮುಗಿಸಿದನಂತರದ ಸೋಮಾರಿ ಸಂಜೆ. ಎಂದಿನಂತೆ ಸಣ್ಣ ಗೊಂದಲಗಳು ಗೋಚರವಾಗಿ, ಸುಲಭ ಪ್ರಶ್ನೆಗಳಿಗೆ ನಿಲುಕದ ಮಬ್ಬಿನಲ್ಲಿ ಏನನ್ನೋ ಗೊಣಗುತ್ತಿದೆ. ಅನಿರೀಕ್ಷಿತವಾಗಿ ತರಲೆ ಫೋನ್ ಕೂಡ ಕಿರುಚಲಾರಂಬಿಸಿತು, ಒಂದು ಕ್ಷಣದ ಮೌನವನ್ನು ಕದಿಯುತ್ತಾ. 


 "Radio Show ಅಂತೆ, ಮಾಡ್ತ್ಯ?" 


 ಪ್ರತೀ ದಿನ ಫೋನ್ ಮಾಡಿ ತಲೆ ತಿನ್ನುವ ಸ್ವಾಭಾವದವನಲ್ಲವಾಗಿದ್ದರೂ ಹೀಗೂ ಒಮ್ಮೊಮ್ಮೆ ಎಲ್ಲರನ್ನು ಆಶ್ಚರ್ಯ ಪಡಿಸುವ ಮನುಷ್ಯ ಕೃಷ್ಣ. “ಎಲ್ಲಿಂದ ಬಂದ್ಯಪ್ಪ ಮಹಾಪುರುಷ?" ಅಂತ ಕೇಳುವ ಮುನ್ನವೇ ತನ್ನ ಚಮತ್ಕಾರವನ್ನು ತೋರಿಸುವ ಅಸಾಧ್ಯ ಪಾರ್ಟಿ. ಈ ಆಹ್ವಾನದ ವಿಶೇಷ ನನಗೆ  ಕ್ಷಣಾರ್ಧದಲ್ಲಿ  ಅರ್ಥವಾಯಿತು.


 
ಹಿಂಜರಿಯದಂತೆ, ನಗುತ್ತಾ ಖಂಡಿತ ಎಂದೆ.


 ಇದು "ಚಿಂದಿ ಚಿತ್ರಾನ್ನ" ರೇಡಿಯೋ ಶೋ ದ ಪ್ರಾರಂಭದ ದಿನಗಳು, ನಮ್ಮ ಮೊದಲ ಹೆಜ್ಜೆ. ಮುಂದಿನ ಶನಿವಾರ ಬೆಳಿಗ್ಗೆ ಬೇಗ ಎದ್ದು, ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿದು Fremont ನ Radio Zindagi Studios ಎದುರುಗಡೆ ಹಾಸ್ಯ ಮಾಡುತ್ತಾ ನಿಂತಿದ್ದಾಗ ಇದು ನಿಜವೇ? ಎಂದು ಭಾಸವಾಯಿತು. ನಮ್ಮ ಈ ಹಾಸ್ಯಾಸ್ಪದ ಮಾತುಗಳು, ಹರಟೆಗಳನ್ನು ಜನರು ಕೆಳುತ್ತಾರ? ಎನ್ನುವ ಪ್ರಶ್ನೆ. ಸಮಯ ಸಮೀಪಿಸುತ್ತಿತ್ತು. ಸ್ವಲ್ಪ ಅಂಜಿಕೆ, ಸಿಕ್ಕಾಪಟ್ಟೆ ಹುರುಪು.




 "ನಮಸ್ಕಾರ Bay Area, ಇದು ನಿಮ್ಮ RJ Lucky" ಎಂದು ನಗುತ್ತಲೇ ಶುರು ಮಾಡುತ್ತಾ ಸರಾಗವಾಗಿ ಮುಂದುವರಿಸಿದೆವು. ಕೊನೆಗೂ ಏನನ್ನೋ ಶುರು ಮಾಡಿದ ಸಂಬ್ರಮ. ಆ ದಿನವನ್ನು ನಾ ಮರೆಯಲಾರೆ.




 ಒಂದು ರೇಡಿಯೋ ಶೋ ಪ್ರಾರಂಭಿಸುವುದು ಸುಲಭ ಕೆಲಸವಲ್ಲ. ಅದಕ್ಕೆ ಬೇಕಾದ 
ಶ್ರದ್ದೆ ಅಘಾದವಾದದ್ದು. ದುಡ್ಡು, ಶ್ರಮ ಅಗತ್ಯ. ಆ ದಿನ ಅದನ್ನು ನಮ್ಮ ಅರಿವಿಗೆ ತಂದಿತು. ಕೆಲಸಕ್ಕೆ ತಕ್ಕಂತೆ ಶೋ ಗೆ ಬೇಕಾಗಿರುವ ಆಸಕ್ತಿಯಿಂದಲೇ ನಾವು ಮುಂದುವರಿದೆವು. 


ಜಗತ್ತಿನಲ್ಲಿ ಮಾತಿಗೆನೂ ಕೊರತೆ ಇಲ್ಲ, ಆದರೆ ಸ್ವಲ್ಪ ತರಲೆ, ಪೂರ್ತಿ ಮಜಾ ಇರೋ ಜಗಲಿ ಕಟ್ತೆಯ ಹರಟೆಗಳು, ನಗುವ ನಗಿಸುವ ತರಲೆ ಟಪೊರಿಗಳ ಖಿಲಾಡಿ ಮಾತುಕತೆಗಳು ಕಡಿಮೆಯಾಗುತ್ತಿರುವ ಸಂಧರ್ಬ ನಿಮ್ಮ ಅನುಭವಕ್ಕೂ ತಿಳಿದಿರಬೇಕು. "ಲೈಫ್ ತುಂಬ tension ಸ್ವಾಮಿ." ಅಂತ ಎಷ್ಟು ಸಲ ಹೇಳಿದ್ದೀರ ಒಮ್ಮೆ ಎಣಿಸಿ ನೋಡಿ. ಒಂದು ಗಂಟೆ ಅವೆಲ್ಲವನ್ನು ಪಕ್ಕಕೆ ಇಟ್ಟು ಮಾತಾಡುವ ಅವಕಾಶ ನೀಡುವ, ಮನರಂಜನೆ, ಗೀತೆಗಳನ್ನು ಕೇಳಿಸಿ ಸಂತೋಷ ಪಡಿಸುವ ನಿಮೆಲ್ಲರ ಅಚ್ಚು ಮೆಚ್ಚಿನ "ಚಿಂದಿ ಚಿತ್ರಾನ್ನ" ಇಂಥ ಕೆಲಸಗಳ ಮಧ್ಯವೇ ಪ್ರಾರಂಭವಾಗಿದ್ದು October 22nd, ೨೦೧೧ ಅಂದು. 


 ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಬೆಳೆದು ಬಂದ ತರಲೆ ಬುದ್ದಿ, ಮಾತಿನ ಚಟ ಇವೆಲ್ಲವನ್ನೂ ಹಂಬಲಿಸುತ್ತಿದ ನಮಗೆ ಇದು ಒಳ್ಳೆ ಮಧ್ಯಮ ಅನ್ನಿಸಿತು. ಪ್ರಯತ್ನಕ್ಕೆ ಬೇಕಿದ್ದ ಉತ್ಸಾಹದ ಕೊರತೆ ಇರಲಿಲ್ಲ , ಸ್ಪೂರ್ಥಿಯೇನೂ ನಮಗೆ ಕಡಿಮೆ ಇರಲಿಲ್ಲ. ಈ ಸಮಯದಲ್ಲಿ ಕನ್ನಡ ಕೂಟದ ಪದ್ಮ ರಾವ್ ಹಾಗೂ ಅಭಿಜಿತ್ ಭರದ್ವಾಜ ನಮಗೆ ಬೆನ್ನೆಲುಬಾಗಿ ನಿತರು, Radio Zindagi ಯಾ ಪ್ರವೀಣ್ ನಮಗೆ ಕೊಟ್ಟ ಪ್ರೋತ್ಸಾಹ ಅಷ್ಟಿಷ್ಟಲ್ಲ. 


 ಮಾತು ಒಂದು ಕಲೆ, ಸ್ವಾಮಿ. ಮೊದಮೊದಲಿಗೆ ಅನಿಶ್ಚಿತವಾಗಿದ್ದ ಇಬ್ಬರು ಕಾಲೇಜ್ ಹುಡುಗರಿಗೆ ಸಿಕ್ಕ ಪ್ರತಿಕ್ರಿಯೆ, ಪ್ರೀತಿ ನೋಡಿ ನಮಗೆ ತುಂಬ ಸಂತೋಷವಾಗಿದೆ. ನಮ್ಮ ಪ್ರತಿಭೆಯನ್ನು ಗುರುತಿಸಿ ನಮಗೆ ಈ ಅವಕಾಶವನ್ನು ದೊರಕಿಸಿಕೊಟ್ಟಿದಕ್ಕೆ, ನಮ್ಮಲ್ಲಿ ವಿಶ್ವಾಸ ಇಟ್ಟಿದಕ್ಕೆ ಧನ್ಯವಾದ. 




ಅಂಬೆಗಾಲಿಡುತ್ತಲೇ ನಮ್ಮ ಶೋ ಮೊದಲನೇ ವಾರದಲ್ಲಿ ತನ್ನ ಫಾಸೆಬೂಕ್ ಪೇಜ್ ನಲ್ಲಿ ೪೨ 'likes' ಗಳಿಸಿತು. ಬೇ ಏರಿಯ ದ ಜನತೆ ಅಷ್ಟೇ ಅಲ್ಲದೆ ಟೆಕ್ಸಾಸ್, ಬೆಂಗಳೂರು, ಹಿಂಗೆ ಅನೇಕ ಪ್ರದೇಶಗಳಲ್ಲಿ ಜನಪ್ರಿಯತೆ ಮೆರೆದಿದೆ ನಮ್ಮ ಕಾರೇಕ್ರಮ. ಇದು ಕನ್ನಡ ಕೂಟ ಹಾಗೂ Radio Zingagi ಯ ಸಹಾಯವಿಲ್ಲದಿದ್ದರೆ ಅಸಾಧ್ಯವಾಗುತಿತ್ತು. 




 ಒಂದು ಸಣ್ಣ ಯೋಚನೆ ಈಗ ಒಳ್ಳೆ ಪ್ರತಿಕ್ರಿಯೆ ಗಳಿಸುತ್ತಿದೆ. ಉನಿವೆರ್ಸಿಟಿ MS ಪದವಿಗಾಗಿ ಓದುತ್ತಿರುವ ನಿಮ್ಮ ಕಿಲಾಡಿ ಹುಡುಗ RJ ಕೃಷ್ ಮತ್ತು ನಿಮೆಲ್ಲರ ಅಚ್ಚು ಮೆಚ್ಚಿನ ಬಿಸ್ಕೆಟ್ ರಾಣಿ RJ ಲಕ್ಕಿ ಇಂದು ಕೇಳುಗರಿಗೆ ಚಿರಋಣಿ.




 "ಚಿಂದಿ ಚಿತ್ರಾನ್ನ" ಬರೀ ಹರಟೆಯ ಖಜಾನವಲ್ಲ, ನಾವು ಬರೀ ಮತುಗಾರರಲ್ಲ. ಇದು ಹಾಡು, ಹಾಸ್ಯ, ಕುಚೋದ್ಯದ ಒಂದು ಸಂಪೂರ್ಣ ಅನುಭವ. ಶೋ ನಲ್ಲಿ ನಾವು ಬೆಂಗಳೂರಿನಿಂದ ಬಿಸಿ ಬಿಸಿ ಸುದ್ದಿ ತರುತ್ತೇವೆ. ವಾರ್ತೆ ನೀಡುತ್ತೇವೆ. Bay Area ದ ಹಲವಾರು ಕರೆಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೆ light ಆಗಿ ಯಾರಿಗಾದರು ಬಕ್ರ ಮಾಡ್ಬೇಕು ಅಂದ್ರೆ "ಕಿವಿ ಮೇಲೆ ಫ್ಲೋವೆರ್" ಇಟ್ಟು "life ಹೆಂಗಿದೆ ಸ್ವಾಮಿ?" ಅಂತ ವಿಚಾರಿಸುತ್ತೇವೆ. ಕೇಳುಗರ ಸಲಹೆಗಳನ್ನು ಗಮನಿಸುತ್ತೇವೆ, ಸುಮಧುರ ಹಾಡುಗಳನ್ನು ಕೇಳಿಸುತ್ತೇವೆ, ಶನಿವಾರದ ಬೆಳಿಗ್ಗೆ ಏಳಕ್ಕೆ ಆಗದವರಿಗೆ ಸುಪ್ರಭಾತವಾಗುತ್ತೇವೆ. ಮಧ್ಯ ಮಧ್ಯ ನಮ್ಮ ಶೋ "ವಾರದ ಸ್ಪೆಷಲ್" ಸಂಚಿಕೆಗಳನ್ನು ಏರ್ಪಡಿಸುತ್ತೇವೆ. ಇದು ನೀವು ಕರೆ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ. ಅವನ್ನು ಮಾತ್ರ ಮಿಸ್ ಮಾಡ್ಕೋಬೇಡಿ. 


"ಚಿಂದಿ ಚಿತ್ರಾನ್ನ" ವಾರ್ತೆ, ಹರಟೆ, ಹಾಸ್ಯದ ಸವಿಯಾದ ಮಿಶ್ರಣ. ಹಿಂಗೆ ಇಲ್ಲಿಯವರೆಗೂ ನಾವು ನಮ್ಮ ಕಾರೇಕ್ರಮದಲ್ಲಿ ಕನ್ನಡ ಕೂಟದ "ಪ್ರೇರಣ" ಶೋ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದೀವಿ, ನಮ್ಮ Studio ಗೆ ಹಲವಾರು ಜನ ಬಂದು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡರು. ಹೊಸ ಜನ, ಹೊಸ ಸಂದರ್ಬಗಳಿಗೆ ನಾವು ಪರಿಚಿತರಾದೆವು. ಕ್ರಮೇಣ ವಾಗಿ  ಪ್ರತಿ ಶನಿವಾರ Studio ಗೆ ಹೋಗೋದೇ ನಮ್ಮ ಅವಿಭಾಜ್ಯ ಅಂಗವಾಗಿಹೋಗಿದೆ.






 ಮಧ್ಯೆ ಮಧ್ಯೆ ಹಲವಾರು ಗೊಂದಲಗಳು ಯೆದಿರಿಸಿದ್ದೂ ಉಂಟು. ಆದರೆ ನಮ್ಮ ಆಸಕ್ತಿಯಲ್ಲಿ ಅದೆಲ್ಲವನ್ನು ಮೆಟ್ಟಿ ನಿಂತಾಗಿದೆ. ನಮ್ಮ ಕಾರೇಕ್ರಮಕ್ಕೆ  ಪ್ರತಿಭಾನ್ವಿತ ಮಾಲ ಅವರು RJ ಆಗುವುದಕ್ಕೆ ಒಪ್ಪಿಕೊಂಡು ಹೊಸ ಮೆರಗು ತಂದಿದ್ದಾರೆ. "ಚಿಂದಿ ಚಿತ್ರಾನ್ನ" ಕ್ಕೆ ವಿವಿಧವಾದ ಪರೀಕ್ಷೆಗಳು ಯೆದುರಾದಂತೆ ಹೊಸ ಹೊಸ ಬದಲಾವಣೆಗಳನ್ನು ಮೈಗೂಡಿಸಿಕೊಂಡು ಬಂದು ನಿಮಗೆ vishista ಸಂಗೀತವನ್ನು ಆಸ್ವಾದಿಸುವ ಅನುಭವನ್ನು ನೀಡುತ್ತಾ ಬಂದಿದ್ದೇವೆ. ಮನರಂಜಿಸಲು ಮರೆತಿಲ್ಲ, ಮರೆಯುವುದಿಲ್ಲ. ನಮ್ಮ ಪ್ರೀತಿಯ ಕೆಳುಗರಿವೆ ಪ್ರತೀ ವಾರವೂ ಏನಾದರೂ ಹೊಸತಾದ ವಿಷಯವನ್ನು ತರುವುದು ನಮ್ಮ ಕರ್ತವ್ಯ. ಇದನ್ನು ಮನಸ್ಸಲ್ಲಿ ಇಟ್ಟುಕೊಂಡೇ ನಿಮೆಲ್ಲರನ್ನು ಮನರಂಜಿಸುತ್ತಾ, ನಗಿಸುತ್ತಾ, ನಾವೂ ನಗುತ್ತಾ ಸುಖವಾಗಿದ್ದೇವೆ. 




 ಇಲ್ಲಿಯವರೆಗೂ ಹಲವಾರು ಅಭಿಮಾನಿಗಳನ್ನು ನಮ್ಮ ಕರೆಕ್ರಮ ಗಳಿಸಿಕೊಂಡು ಬಂದಿದೆ. ಬನ್ನಿ ಸ್ವಲ್ಪ ಮಾತಾಡಿ, ಚೂರು ಹರಟೆ ಹೊಡಿಯೋಣ, ಪೂರ್ತಿ ಮಜಾ ಮಾಡೋಣ. ಸ್ನೇಹಿತರೆ, ಬೆಳಿಗ್ಗೆ ೯-೧೦ AM ಸಮಯಕ್ಕೆ Radio Zindagi ೧೫೫೦ ಕೇಳಿಸ್ಕೋಳೋಕ್ಕೆ ಮರಿಬೇಡಿ. 


 ಸಿಗ್ತ್ಹೀವಿ ಸ್ವಾಮೀ, ಸ್ವಲ್ಪ ತರಲೆ, ಸ್ವಲ್ಪ ಹಾಸ್ಯ ಪೂರ್ತಿ ಮಜಾ ಮಾಡುತ್ತಾ!




 --ನಿಮ್ಮ ಪ್ರೀತಿಯ RJ ಗಳು.

ನಿರಾಶೆ

ಬಾಡಿದ ಜೀವ
ಕುಂದಿಹೊಗುತ್ತಿರುವ ಬೆಳಕು..
ಮರೆಯಾದ ಹುರುಪು 
ಮನದಂಗಳದಲ್ಲಿ ಕರಾಳ ಮೌನ   
ಮಾತನಾಡೀತೇ? ನಾನರಿಯದ ಅರಿವಿನ,
ಅನಿರೀಕ್ಷಿತ ಅನಾವರಣ. 

ಹೆಣೆದಿಹ ಕನಸುಗಳು ಸರಮಾಲೆಯಾಗಿ ನಿಂತಿಹವು,
ಪೋಣಿಸಿದೆ--ಒಂದು, ಮೂರು, ನೂರು, ಹಲವಾರು,
ಕಣ್ಣಲ್ಲಿ ಕಾಪಾಡಿರುವ ಆಕಾಂಕ್ಷೆ,
ನಿರಾಶೆಯ ಸುಳಿಯಲ್ಲಿ ಸುಳ್ಳಾದೀತೆ?

ಆಸೆಯ, ನಿರಾಶೆಯ, ಬಯಕೆಯ, ಅಭಿಲಾಷೆಯ 
ಅಘಾದವಾದ 
ಧೀರ್ಗ ಸೆಳೆತ,
ಮರೀಚಿಕೆಯಾಗಿಹ ಕನಸುಗಳು ಹೀಗೊಮ್ಮೆ ನುಸುಳಿ, ಸತಾಯಿಸಿ, 
ಕೈಜಾರಿ, ದೂರದಿಂದ ನಗೆ ಬೀರುತ್ತಲಿವೆ,
ಕನವರಿಕೆಯಲ್ಲಿ ಕವನಗಳಾಗುತ್ತಾ
ಕನಿಕರ ತೋರದಂತೆ.... 

ಒಗಟು

ಒಂದು ಪ್ರಶ್ನೆ, ಒಂದು ಉತ್ತರ,
ಸರಳ, ಸಾಧಾರಣ, ಸುಂದರ,
ಪ್ರಶ್ನಿಸಿದರೆ ಕೊನೆಗೆ, ಅನಂತರ,
ಉತ್ತರವಾಗಲಿಲ್ಲವಲ್ಲ ಗೋಚರ!



ಉತ್ತರವೇ ಇಲ್ಲದಿದ್ದರೆ?
ಎಂದು ಮರುಪ್ರಶ್ನಿಸಿದರೆ,
ಒಗಟಿಗೆ ಮನಸೋತರೆ,
ಅಂದಳು, ನೀ ಹುಡುಕುವುದಿಲ್ಲವೇ?




ಮತ್ತದೇ ಆಟವೆಂಬ ಹುಸಿಮುನಿಸು
ಕಬ್ಬಿಣದ ಕಡಲೆಯಾಗಿದೆ ಒಗಟು
ಮತ್ತೊಮ್ಮೆ ಬಿಡಿಸಿ ಹೇಳು
ಮೆಲ್ಲಗೆ, ಎಂದೇನಾ, ವಿವರಿಸು...

ಬರೆದಳಾಗ ಮತ್ತೊಮ್ಮೆ, ಮರೆಯದಂತೆ
ತಿದ್ದಿ ತೀಳಿ ಮಸಿಯಲ್ಲಿ,
ಮಂಜು ಕರಗಿತು ಮೊನ್ನೆ
ನಗುತ ಪುಸ್ತಕ ಮುಚ್ಚಿದೆ, ತಿಳಿದಿಲ್ಲವೆಂದೆ!

ಕಳೆದುಹೋದ ದಾರಿ

ಗುರಿಯಿಲ್ಲದಂತೆ ನಿರರ್ಥಕ 
ಸವೆದ ಕಾಲುಗಳು, ಹಸಿ ಮುಂಜಾವು,
ಕಾಲುದಾರಿಗೆ ಅಪರಿಚಿತೆಯಾಗಿ ದಾರಿಗಾಣದೆ 
ಸಾಮರ್ಥ್ಯದ ಆಗಮನಕ್ಕೆ ಕೂಗಿದಳು, ಎಳೆ ಬಿಸಿಲಿನಲ್ಲಿ ನಿಂತು. 

ಆದರೆ ನಿಂತಿಲ್ಲವಲ್ಲ ಯಾರೂ ಕಾಡಿಗೆ ಕಾವಲು 
ಕರುಣೆಯ ಕಂಬನಿಯನ್ನು ಸುರಿಸಲು 
ಉತ್ತರಿಸುವುದೇ ತೊದಲುವ ಎಳೆ ಮುಂಜಾವು?
ಶಕ್ತಿಹೀನಳಂತೆ ಅಲ್ಲೇ ಕುಳಿತು ಕಾದಳು 

ಬೇರ್ಯರು ಬೆಕವ್ವ ದಾರಿ ತೋರಲು?
ನೀನಿಲ್ಲವೆನವ್ವ, ಸ್ವಬೆಂಬಲ ನೀಡಲು 
ದೂರವಿರುವರು ಬೇಕಾದವರು, 
ನಡೆಮುಂದೆ ಖಚಿತವಾಗಿ ಹಿಂದಿರುಗುವರು 

ಮಲಗಿದ್ದ ಕಣ್ಣುಗಳು ಹೊಸ ಕಾಂತಿ ಕಂಡಾಗ, 
ಎಲ್ಲಿಂದ ಹೊಮ್ಮಿತು ಆಶ್ವಾಸನೆ? ಬೆರಗಾದಳು
ನನ್ನ ಕನಸೇ ಮತನಾಡಿತೆ ಎಂದು ಕೂಗಲು 
ಏನೂ ಹೇಳಲಿಲ್ಲ ಕಾಡಿನ ಕಗ್ಗತ್ತಲು.... 

ರಾತ್ರಿಯಾದರೇನಂತೆ ಅವಳಿಗದು ಹಗಲು 
ಬಿದ್ದು ಹೋದ ಜೀವಕ್ಕೆ ಭರವಸೆ ಮೂಡಲು 
ಸ್ಥೈರ್ಯ, ಸಂತೋಷ, ಸ್ವಾಭಿಮಾನ ಚಿಮ್ಮಲು,
ದಾರಿಕಂಡಿತು, ಕತ್ತಲಲ್ಲೂ ಮುಂದುವರೆದಳು.