ಆರಂಭ

ಮೊದಲ ಹೆಜ್ಜೆಗಳು.....

ನಿರಾಶೆ

ಬಾಡಿದ ಜೀವ
ಕುಂದಿಹೊಗುತ್ತಿರುವ ಬೆಳಕು..
ಮರೆಯಾದ ಹುರುಪು 
ಮನದಂಗಳದಲ್ಲಿ ಕರಾಳ ಮೌನ   
ಮಾತನಾಡೀತೇ? ನಾನರಿಯದ ಅರಿವಿನ,
ಅನಿರೀಕ್ಷಿತ ಅನಾವರಣ. 

ಹೆಣೆದಿಹ ಕನಸುಗಳು ಸರಮಾಲೆಯಾಗಿ ನಿಂತಿಹವು,
ಪೋಣಿಸಿದೆ--ಒಂದು, ಮೂರು, ನೂರು, ಹಲವಾರು,
ಕಣ್ಣಲ್ಲಿ ಕಾಪಾಡಿರುವ ಆಕಾಂಕ್ಷೆ,
ನಿರಾಶೆಯ ಸುಳಿಯಲ್ಲಿ ಸುಳ್ಳಾದೀತೆ?

ಆಸೆಯ, ನಿರಾಶೆಯ, ಬಯಕೆಯ, ಅಭಿಲಾಷೆಯ 
ಅಘಾದವಾದ 
ಧೀರ್ಗ ಸೆಳೆತ,
ಮರೀಚಿಕೆಯಾಗಿಹ ಕನಸುಗಳು ಹೀಗೊಮ್ಮೆ ನುಸುಳಿ, ಸತಾಯಿಸಿ, 
ಕೈಜಾರಿ, ದೂರದಿಂದ ನಗೆ ಬೀರುತ್ತಲಿವೆ,
ಕನವರಿಕೆಯಲ್ಲಿ ಕವನಗಳಾಗುತ್ತಾ
ಕನಿಕರ ತೋರದಂತೆ.... 

ಒಗಟು

ಒಂದು ಪ್ರಶ್ನೆ, ಒಂದು ಉತ್ತರ,
ಸರಳ, ಸಾಧಾರಣ, ಸುಂದರ,
ಪ್ರಶ್ನಿಸಿದರೆ ಕೊನೆಗೆ, ಅನಂತರ,
ಉತ್ತರವಾಗಲಿಲ್ಲವಲ್ಲ ಗೋಚರ!



ಉತ್ತರವೇ ಇಲ್ಲದಿದ್ದರೆ?
ಎಂದು ಮರುಪ್ರಶ್ನಿಸಿದರೆ,
ಒಗಟಿಗೆ ಮನಸೋತರೆ,
ಅಂದಳು, ನೀ ಹುಡುಕುವುದಿಲ್ಲವೇ?




ಮತ್ತದೇ ಆಟವೆಂಬ ಹುಸಿಮುನಿಸು
ಕಬ್ಬಿಣದ ಕಡಲೆಯಾಗಿದೆ ಒಗಟು
ಮತ್ತೊಮ್ಮೆ ಬಿಡಿಸಿ ಹೇಳು
ಮೆಲ್ಲಗೆ, ಎಂದೇನಾ, ವಿವರಿಸು...

ಬರೆದಳಾಗ ಮತ್ತೊಮ್ಮೆ, ಮರೆಯದಂತೆ
ತಿದ್ದಿ ತೀಳಿ ಮಸಿಯಲ್ಲಿ,
ಮಂಜು ಕರಗಿತು ಮೊನ್ನೆ
ನಗುತ ಪುಸ್ತಕ ಮುಚ್ಚಿದೆ, ತಿಳಿದಿಲ್ಲವೆಂದೆ!

ಕಳೆದುಹೋದ ದಾರಿ

ಗುರಿಯಿಲ್ಲದಂತೆ ನಿರರ್ಥಕ 
ಸವೆದ ಕಾಲುಗಳು, ಹಸಿ ಮುಂಜಾವು,
ಕಾಲುದಾರಿಗೆ ಅಪರಿಚಿತೆಯಾಗಿ ದಾರಿಗಾಣದೆ 
ಸಾಮರ್ಥ್ಯದ ಆಗಮನಕ್ಕೆ ಕೂಗಿದಳು, ಎಳೆ ಬಿಸಿಲಿನಲ್ಲಿ ನಿಂತು. 

ಆದರೆ ನಿಂತಿಲ್ಲವಲ್ಲ ಯಾರೂ ಕಾಡಿಗೆ ಕಾವಲು 
ಕರುಣೆಯ ಕಂಬನಿಯನ್ನು ಸುರಿಸಲು 
ಉತ್ತರಿಸುವುದೇ ತೊದಲುವ ಎಳೆ ಮುಂಜಾವು?
ಶಕ್ತಿಹೀನಳಂತೆ ಅಲ್ಲೇ ಕುಳಿತು ಕಾದಳು 

ಬೇರ್ಯರು ಬೆಕವ್ವ ದಾರಿ ತೋರಲು?
ನೀನಿಲ್ಲವೆನವ್ವ, ಸ್ವಬೆಂಬಲ ನೀಡಲು 
ದೂರವಿರುವರು ಬೇಕಾದವರು, 
ನಡೆಮುಂದೆ ಖಚಿತವಾಗಿ ಹಿಂದಿರುಗುವರು 

ಮಲಗಿದ್ದ ಕಣ್ಣುಗಳು ಹೊಸ ಕಾಂತಿ ಕಂಡಾಗ, 
ಎಲ್ಲಿಂದ ಹೊಮ್ಮಿತು ಆಶ್ವಾಸನೆ? ಬೆರಗಾದಳು
ನನ್ನ ಕನಸೇ ಮತನಾಡಿತೆ ಎಂದು ಕೂಗಲು 
ಏನೂ ಹೇಳಲಿಲ್ಲ ಕಾಡಿನ ಕಗ್ಗತ್ತಲು.... 

ರಾತ್ರಿಯಾದರೇನಂತೆ ಅವಳಿಗದು ಹಗಲು 
ಬಿದ್ದು ಹೋದ ಜೀವಕ್ಕೆ ಭರವಸೆ ಮೂಡಲು 
ಸ್ಥೈರ್ಯ, ಸಂತೋಷ, ಸ್ವಾಭಿಮಾನ ಚಿಮ್ಮಲು,
ದಾರಿಕಂಡಿತು, ಕತ್ತಲಲ್ಲೂ ಮುಂದುವರೆದಳು.